ಗೋಂಡಾ -
	ಉತ್ತರಪ್ರದೇಶದ ಫೈಜಾಬಾದ್ ವಿಭಾಗದ ಒಂದು ಜಿಲ್ಲೆ; ಅದರ ಕೇಂದ್ರ. ವಿಸ್ತೀರ್ಣ 2,827 ಚ. ಮೈ. ಜನಸಂಖ್ಯೆ 23,02,070 (1971). ಗೋಧ್ರ ಮತ್ತು ರಾಪ್ತಿ ನದಿಗಳು ಈ ಜಿಲ್ಲೆಯ ಮೂಲಕ ಹಾದುಹೋಗುತ್ತವೆ. ಇಲ್ಲಿಯ ಹವೆ ಅನಾರೋಗ್ಯಕರ. ವಾರ್ಷಿಕ ಮಳೆ 44". ವ್ಯವಸಾಯ ಇಲ್ಲಿಯ ಜನರ ಮುಖ್ಯ ಕಸಬು. ಕೆಲವಡೆ ಉರುಟು ಹತ್ತಿ ಬಟ್ಟೆಗಳನ್ನು ನೇಯುತ್ತಾರೆ. ಉತ್ರೌಲಾ ಕುಂಭಗಾರಿಕೆಗೆ ಪ್ರಸಿದ್ಧ. ನೇಪಾಳದೊಂದಿಗೆ ಈ ಜಿಲ್ಲೆ ಸ್ವಲ್ಪ ಮಟ್ಟಿಗೆ ವ್ಯಾಪಾರ ನಡೆಸುತ್ತದೆ. ಹಿಂದೆ ಈ ಜಿಲ್ಲೆ ಕೋಸಲ ರಾಜ್ಯದ ಒಂದು ಭಾಗವಾಗಿತ್ತೆಂದು ಹೇಳಲಾಗಿದೆ. ಅನಂತರ ಇದು ರಜಪೂತರ ಆಳ್ವಿಕೆಗೆ ಒಳಪಟ್ಟಿತ್ತು. 15ನೆಯ ಶತಮಾನದಲ್ಲಿ ಕಲ್ಹಣ ವಂಶದವರು ಪ್ರಬಲರಾದರು. ಬರಬರುತ್ತ ಇವರ ಬಲ ಕುಗ್ಗಿತು. ಮುಸ್ಲಿಮರ ಆಡಳಿತ ಪ್ರಾರಂಭವಾಯಿತು. 1856ರಲ್ಲಿ ಈ ಜಿಲ್ಲೆ ಬ್ರಿಟಿಷರ ಅಧೀನಕ್ಕೆ ಬಂತು. 1857ರ ಬಂಡಾಯದಲ್ಲಿ ಗೋಂಡಾ ರಾಜನೂ ತುಳಸೀಪುರದ ರಾಣಿಯೂ ಬ್ರಿಟಿಷರ ವಿರುದ್ಧ ನಡೆಸಿದ ಪಿತೂರಿ ನಿಷ್ಫಲವಾಯಿತು. 

	ಗೋಂಡಾ ಪಟ್ಟಣ ಒಂದು ರೈಲ್ವೆ ಜಂಕ್ಷನ್. ಘಾಘ್ರಾ ನದಿಯ ದಂಡೆಯ ಮೇಲಿದೆ. ಅಕ್ಬರನ ಆಳ್ವಿಕೆಯಲ್ಲಿ ಮಾನ್‍ಸಿಂಗ್ ಈ ನಗರವನ್ನು ಕಟ್ಟಿಸಿದನೆಂದು ಪ್ರತೀತಿ. ಇಲ್ಲಿ ಎರಡು ಕೆರೆಗಳಿವೆ. ಪಟ್ಟಣದ ಜನಸಂಖ್ಯೆ 52,647 (1971).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ